ಎಫಿಗ್ರಾಫಿಯ ಕರ್ಣಾಟಕ

	ಹೆಸರೇ ಸೂಚಿಸುವಂತೆ ಕರ್ಣಾಟಿಕದ ಶಾಸನಸಾಹಿತ್ಯ ಪ್ರಕಟನೆ ಮತ್ತು ವ್ಯಾಖ್ಯಾನಕ್ಕೆ ಮೀಸಲಾದ ಪತ್ರಿಕೆ. 1884ರಲ್ಲಿ ಮೈಸೂರು ಸರ್ಕಾರದ ಕಾರ್ಯದರ್ಶಿ ಮತ್ತು ಪುರಾತತ್ವನಿರ್ದೇಶಕರಾಗಿದ್ದ ಪ್ರಸಿದ್ಧ ವಿದ್ವಾಂಸ ಲೂಯಿ ರೈಸ್ ಹಳೆಯ ಮೈಸೂರು ಸಂಸ್ಥಾನ ಮತ್ತು ಕೊಡಗು ಪ್ರದೇಶದಲ್ಲಿ ದೊರೆಯುವ ಅನೇಕ ಶಾಸನಗಳನ್ನು ಸಂಗ್ರಹಿಸಿ ಪ್ರಸಿದ್ಧಪಡಿಸಬೇಕೆಂಬ ಯೋಜನೆಯನ್ನು ಕೈಗೊಂಡು 1886ರಲ್ಲಿ ಕೊಡಗಿನ 23 ಶಾಸನಗಳನ್ನು ಎಪಿಗ್ರಾಫಿಯ ಕರ್ಣಾಟಿಕ ಎಂಬ ಹೆಸರಿನಿಂದ ಪ್ರಸಿದ್ಧಪಡಿಸಿದರು. ಇದೇ ಪತ್ರಿಕೆಯ ಮೊದಲ ಸಂಪುಟವಾಯಿತು. ಎರಡನೆಯ ಸಂಪುಟದಲ್ಲಿ ಶ್ರವಣಬೆಳಗೊಳದಲ್ಲಿ ದೊರೆತ ಸುಮಾರು 150 ಶಾಸನಗಳನ್ನು ಪ್ರಕಟಿಸಲಾಯಿತು (1889). ಇವೆರಡು ಸಂಪುಟಗಳ ಪ್ರಕಟನೆಯಿಂದ ಶಾಸನಗಳ ಅಧ್ಯಯನದ ಬಗ್ಗೆ ಹೆಚ್ಚಿನ ಆಸ್ಥೆಯುಂಟಾಗಿ 1890ರಲ್ಲಿ ಆಗಿನ ದಿವಾನರಾದ ಶೇಷಾದ್ರಿ ಅಯ್ಯರ್ ಅವರ ಸಲಹೆಯಂತೆ ಹಳೆಯ ಮೈಸೂರು ಸಂಸ್ಥಾನದಲ್ಲಿ ಪ್ರತ್ಯೇಕವಾದ ಪುರಾತತ್ವಶಾಖೆಯನ್ನು ಲ್ಯೂಯಿ ರೈಸರ ನೇತೃತ್ವದಲಿ ಸ್ಥಾಪಿಸಲಾಯಿತು. ಆದ್ದರಿಂದ ಈ ಭಾಗದ ಪ್ರತಿಯೊಂದು ಜಿಲ್ಲೆಯಲ್ಲಿಯ ಶಾಸನಗಳ ಸಂಗ್ರಹ, ಅಧ್ಯಯನ ಮತ್ತು ಪ್ರಕಟನೆಯ ಕಾರ್ಯವನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಲಾಯಿತು. ಮುಂದೆ ಸುಮಾರು 15 ವರ್ಷಗಳ ಅವಧಿಯಲ್ಲಿ ಎಪಿಗ್ರಾಫಿಯ ಕರ್ಣಾಟಿಕ ಪತ್ರಿಕೆಯ 3ನೆಯ ಸಂಪುಟದಿಂದ 12ನೆಯ ಸಂಪುಟದವರೆಗೆ ಮೈಸೂರು, ಹಾಸನ, ಕಡೂರು, ಶಿವಮೊಗ್ಗ, ಬೆಂಗಳೂರು, ಕೋಲಾರ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಶಾಸನಗಳನ್ನು ಸಂಗ್ರಹಿಸಿ ಪ್ರಸಿದ್ಧಪಡಿಸಲಾಯಿತು. ಹೀಗೆ 1886ರಿಂದ 1906ರವರೆಗಿನ 20 ವರ್ಷಗಳ ಅವಧಿಯಲ್ಲಿ ರೈಸ್ ಈ ಪತ್ರಿಕೆಯಲ್ಲಿ 12 ಬೃಹತ್ ಸಂಪುಟಗಳನ್ನು ಸಂಪಾದಿಸಿ ಪ್ರಸಿದ್ಧಪಡಿಸಿದರು. ಈ ಸಂಪುಟಗಳಲ್ಲಿ ಹಳೆಯ ಮೈಸೂರು ಸಂಸ್ಥಾನದ ಎಲ್ಲ ಜಿಲ್ಲೆಗಳಲ್ಲಿ ಸಂಗ್ರಹಿಸಿದ ಸುಮಾರು 9,000 ಶಾಸನಗಳು ಅಚ್ಚಾಗಿವೆ. ಆಗಿನ ಮೈಸೂರು ಸರ್ಕಾರ ಸಾಧಿಸಿದ ಇಂಥ ಮಹತ್ಕಾರ್ಯವನ್ನು ಭಾರತ ದೇಶದ ಬೇರೆ ಯಾವ ಪ್ರಾಂತ್ಯವಾಗಲೀ ಸಂಸ್ಥಾನವಾಗಲೀ ಸಾಧಿಸಿಲ್ಲ. ಇಂಥ ಬೃಹತ್ ಯೋಜನೆಯನ್ನು ಕೈಗೊಂಡು ಕಾರ್ಯಗತ ಮಾಡಿದ ಶ್ರೇಯಸ್ಸು ಲ್ಯೂಯಿ ರೈಸರಿಗೆ ಸಲ್ಲುತ್ತದೆ. ಈ ಸಂಪುಟಗಳಲ್ಲಿ ಪ್ರಸಿದ್ಧಪಡಿಸಲಾದ ಶಾಸನಗಳ ಪಾಠವನ್ನು ಕನ್ನಡ ಮತ್ತು ರೋಮನ್ ಲಿಪಿಗಳಲ್ಲಿ ಕೊಟ್ಟಿದ್ದು ಅವುಗಳ ಇಂಗ್ಲಿಷ್ ಭಾಷಾಂತರವನ್ನೂ ಒದಗಿಸಲಾಗಿದೆ. ಇದಲ್ಲದೆ ಪ್ರತಿಯೊಂದು ಸಂಪುಟದಲ್ಲಿ ಪ್ರಸಿದ್ಧಪಡಿಸಿದ ಶಾಸನಗಳ ಮಹತ್ತ್ವವನ್ನು ಕುರಿತು ವಿಸ್ತøತವಾದ ಮುನ್ನುಡಿಯನ್ನು ರೈಸರೇ ಬರೆದಿದ್ದಾರೆ. ಎಪಿಗ್ರಾಫಿಯ ಕರ್ಣಾಟಿಕದ 12 ಸಂಪುಟಗಳಲ್ಲಿ ಪ್ರಕಟವಾದ ಶಾಸನಗಳು ಕರ್ಣಾಟಿಕದ ಇತಿಹಾಸ-ಸಂಸ್ಕøತಿಗಳ ಅಧ್ಯಯನಕ್ಕೆ ತಳಹದಿಯಾಗಿದ್ದು ಕೆಲವು ಶಾಸನಗಳು ಇಡೀ ಭಾರತ ದೇಶದ ಇತಿಹಾಸ-ಸಂಸ್ಕøತಿಗಳ ಮೇಲೆ ಮಹತ್ತ್ವದ ಬೆಳಕನ್ನು ಬೀರುತ್ತವೆ. ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿಂಗರಾಮೇಶ್ವರ ಎಂಬಲ್ಲಿ ದೊರೆತ ಅಶೋಕ ಸಮ್ರಾಟನ ಶಾಸನಗಳಿಂದ ಮೌರ್ಯರ ಆಡಳಿತ ಮೈಸೂರಿನವರೆಗೂ ವಿಸ್ತರಿಸಿತ್ತೆಂದು ವಿಶದವಾಗುವುದು. ರೈಸ್ ನಿವೃತ್ತರಾದಮೇಲೆ 1914ರಲ್ಲಿ ಎಪಿಗ್ರಾಫಿಯ ಕರ್ಣಾಟಿಕದ ಮೊದಲ ಸಂಪುಟವನ್ನು ಪುನಃ ಪರಿಷ್ಕರಿಸಿ ಕೊಡಗಿನಲ್ಲಿ ದೊರೆತ ಹೆಚ್ಚಿನ ಶಾಸನಗಳನ್ನು ಸೇರಿಸಿ ವಿಸ್ತøತವಾದ ಆವೃತ್ತಿಯನ್ನು ಪ್ರಸಿದ್ಧಪಡಿಸಿದರು. ತರುವಾಯ ಪುರಾತತ್ವಶಾಖೆಯ ನಿರ್ದೇಶಕರಾದ ಆರ್. ನರಸಿಂಹಾಚಾರ್ಯರು ಶ್ರವಣಬೆಳುಗೊಳದ ಎರಡನೆಯ ಸಂಪುಟವನ್ನು ಪುನಃ ಪರಿಶೀಲಿಸಿ ಸುಮಾರು 350 ಹೊಸ ಶಾಸನಗಳನ್ನು ಸೇರಿಸಿ ವಿಸ್ತøತವಾದ ಆವೃತ್ತಿಯನ್ನು 922-23ರಲ್ಲಿ ಪ್ರಸಿದ್ಧಪಡಿಸಿದ್ದಾರೆ. ಈ ವಿದ್ವಾಂಸರು 1906ರಿಂದ 1922ರವರೆಗಿನ 16 ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ಸುಮಾರು 5,000 ಹೊಸ ಶಾಸನಗಳನ್ನು ಹಳೆಯ ಮೈಸೂರು ಭಾಗದ ಜಿಲ್ಲೆಗಳಲ್ಲಿ ಸಂಗ್ರಹಿಸಿ ಪ್ರಕಟನೆಗಾಗಿ ಸಿದ್ಧಪಡಿಸಿದರು. ಅವುಗಳಲ್ಲಿ ಕೆಲವು ಮಹತ್ತ್ವದ ಶಾಸನಗಳನ್ನು ತಾವು ಸಂಪಾದಿಸಿದ ವಾರ್ಷಿಕ ವರದಿಗಳಲ್ಲಿ ಪ್ರಸಿದ್ಧಪಡಿಸಿದ್ದಾರೆ. ಉಳಿದವನ್ನು ಎಪಿಗ್ರಾಫಿಯ ಕರ್ಣಾಟಿಕ ಪತ್ರಿಕೆಯ 14 ರಿಂದ 19ನೆಯ ಸಂಪುಟಗಳಲ್ಲಿ ಪ್ರಕಟಿಸಬೇಕೆಂದೂ ಯೋಚಿಸಲಾಗಿತ್ತು. ಈ ಪತ್ರಿಕೆಯ 13ನೆಯ ಸಂಪುಟದಲ್ಲಿ 1ರಿಂದ 12 ಸಂಪುಟಗಳಲ್ಲಿ ಪ್ರಕಟವಾದ ಶಾಸನಗಳ ವಿಷಯಸೂಚಿಯನ್ನು ಪ್ರಸಿದ್ಧಪಡಿಸಬೇಕೆಂದು ಉದ್ದೇಶಿಸಿ ಡಾ. ಎಂ. ಎಚ್. ಕೃಷ್ಣ ಅವರು ಅದರ ಮೊದಲ ಭಾಗದಲ್ಲಿ ಅಕಾರದಿಂದ ಕಕಾರದವರೆಗಿನ ಶಬ್ದಗಳನ್ನು ಕ್ರಿ. ಶ. 1934ರಲ್ಲಿ ಪ್ರಕಟಿಸಿದರು. ಉಳಿದ ಶಬ್ದಗಳನ್ನೊಳಗೊಂಡ ಎರಡನೆಯ ಭಾಗ ಇದುವರೆಗೆ ಅಚ್ಚಾಗಿಲ್ಲ. ಈ ಪತ್ರಿಕೆಯ 14 ಮತ್ತು 15ನೆಯ ಸಂಪುಟಗಳಲ್ಲಿ ಮೈಸೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳ ಶಾಸನಗಳನ್ನು ಡಾ. ಕೃಷ್ಣ ಅವರು 1943ರಲ್ಲಿ ಪ್ರಕಟಪಡಿಸಿದರು. ತುಮಕೂರು ಜಿಲ್ಲೆಯ ಶಾಸನಗಳನ್ನೊಳಗೊಂಡ 16ನೆಯ ಸಂಪುಟವನ್ನು ಪ್ರೊ. ನೀಲಕಂಠಶಾಸ್ತ್ರಿಗಳು 1956ರಲ್ಲೂ ಕೋಲಾರ ಜಿಲ್ಲೆಯ ಶಾಸನಗಳನ್ನೊಳಗೊಂಡ 17ನೆಯ ಸಂಪುಟವನ್ನು ಡಾ. ಎಂ.ಶೇಷಾದ್ರಿ ಅವರು 1965ರಲ್ಲೂ ಪ್ರಸಿದ್ಧಪಡಿಸಿದರು. ಅಂತು ಎಪಿಗ್ರಾಫಿಯ ಕರ್ಣಾಟಿಕ ಪತ್ರಿಕೆಯ ಒಟ್ಟು 17 ಸಂಪುಟಗಳು ಇದುವರೆಗೆ ಪ್ರಕಟವಾಗಿದ್ದು ಅವುಗಳಲ್ಲಿ ಸುಮಾರು 10,500 ಕ್ಕಿಂತಲೂ ಹೆಚ್ಚಿಗೆ ಶಾಸನಗಳು ಅಚ್ಚಾಗಿವೆ. ಈಚೆಗೆ ಕರ್ಣಾಟಿಕದಲ್ಲಿ ಹೊಸ ಶಾಸನಗಳು ದೊರೆತಿವೆ. ಹಳೆಯ ಶಾಸನಗಳ ಪುನರ್ ಪರಿಶೀಲನೆಯೂ ನಡೆಯುತ್ತಿದೆ. ಈ ದೃಷ್ಟಿಯಿಂದ ಎಪಿಗ್ರಾಫಿಯ ಕರ್ಣಾಟಿಕದ ಪರಿಶೋಧನೆ ಮತ್ತು ಪುನರ್‍ಮುದ್ರಣಗಳಿಗಾಗಿ ಬೃಹದ್‍ಯೋಜನೆಯೊಂದು ಸಿದ್ಧವಾಗುತ್ತಲಿದೆ.
(ಜೆ.ಎಸ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ